ರಾಜೀನಾಮೆ ಬಾಂಬ್ ಸಿಡಿಸಿದ ಸಿಎಂ ಯಡಿಯೂರಪ್ಪ; ಹೈಕಮಾಂಡನತ್ತ ಎಲ್ಲರ ಚಿತ್ತ

ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡಲು ಸಿದ್ದ: ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದೆ. ಹೈ ಕಮಾಂಡ್ ಎಲ್ಲಿಯವರೆಗೆ ಅಧಿಕಾರದಲ್ಲಿರಲು ಹೇಳುತ್ತಾರೋ ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಇರುತ್ತೇನೆ. ರಾಜೀನಾಮೆ ನೀಡುವಂತೆ ಹೈಕಮಾಂಡ್ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾನು ಯಾವುದೇ ಗೊಂದಲದಲ್ಲಿ ಇಲ್ಲ. ನನಗೆ ಹೈಕಮಾಂಡ್ ಅಧಿಕಾರ ನಡೆಸಲು ಅವಕಾಶಕೊಟ್ಟಿದೆ. ಆ ನಿಟ್ಟಿನಲ್ಲಿ ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿ, ಜನರ ಏಳಿಗಾಗಿ ನಾನು ಕೆಲಸ ಮಾಡುತ್ತೇನೆ. ಯಾವಾಗ ಹೈಕಮಾಂಡ್ ರಾಜೀನಾಮೆಗೆ ಸೂಚಿಸುತ್ತೋ ತಕ್ಷಣ ರಾಜೀನಾಮೆ ನೀಡುತ್ತೇನೆ. ಇನ್ನೂ ಪರ್ಯಾಯ ನಾಯಕರು ಇಲ್ಲ ಎಂಬ ಮಾತನ್ನು ನಾನು ಒಪ್ಪಲ್ಲ ಎಂದು ಅವರು ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದ್ದಾರೆ.
ಆದರೆ ಸಿಎಂ ಹೀಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಲೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದು, ಯಡಿಯೂರಪ್ಪ ಅವರು ಆಡಳಿತಾತ್ಮಕ ದೃಷ್ಟಿಯಿಂದ ಆದರೂ ಈ ರೀತಿಯ ಬಹಿರಂಗ ಹೇಳಿಕೆಯನ್ನು ನೀಡಿಬಾರದು, ಅವರ ಈ ಹೇಳಿಕೆ ರಾಜ್ಯದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬಿಳಲಿದೆ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.