ವಾಕ್ಸಿನ್ ಖರೀದಿಗೆ ಸರ್ಕಾರಕ್ಕೆ 100 ಕೋಟಿ ನೆರವು

ವಾಕ್ಸಿನ್ ಖರೀದಿಗೆ ಸರ್ಕಾರಕ್ಕೆ 100 ಕೋಟಿ ನೆರವು: ವಿಪಕ್ಷ ನಾಯಕ ಸಿದ್ದರಾಮಯ್ಯ
ಮಹಾಂತೇಶ ಇರಳಿ
ಬೆಂಗಳೂರು: ಕರೋನಾ ಮಾಹಾಮಾರಿ ಹಟ್ಟಹಾದ ನಡುವೆ ಜನರಿಗೆ ವಾಕ್ಸಿನ್ ಅಭಾವ ಉಂಟಾಗುತ್ತಿದ್ದು, 100 ಕೋಟಿ ರೂಪಾಯಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿಯಂತೆ ಒಟ್ಟು 100 ಕೋಟಿ ರೂಪಾಯಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ದೇಶದ ಪ್ರತಿಯೊಬ್ಬರಿಗೂ ಕೊರೊನಾ ವ್ಯಾಕ್ಸಿನ್ ನೀಡುವುದೇ ಸೋಂಕು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟರೊಳಗೆ ಕನಿಷ್ಠ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ನೀಡಿದ್ದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಬಂದಿರುತ್ತಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಇಂದು ಜನ ವ್ಯಾಕ್ಸಿನ್‌ಗಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವ್ಯಾಕ್ಸಿನ್ ನೀಡಿಕೆ ಸಂಬಂಧ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಇಷ್ಟಾದರೂ ಬಿಜೆಪಿ ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.