ಆಕ್ಸಿಜನ್ ಬಸ ಚಾಲನೆಗೆ ಸಿದ್ದತೆ: ಡಿಸಿಎಂ ಲಕ್ಷ್ಮಣ ಸವದಿ

“ಆಕ್ಸಿಜನ್ ಬಸ್” ಚಾಲನೆಗೆ ಸಿದ್ದತೆ: ಡಿಸಿಎಂ ಸವದಿ
ಶ್ರೀನಿವಾಸ ಪಟ್ಟಣ
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಆಕ್ಸಿಜನ್ ಗಾಗಿ ಪರದಾಡುವುದನ್ನು ತಪ್ಪಿಸಲು, ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿ.ಎಂ.ಟಿ.ಸಿ. ಸಂಸ್ಥೆಯು ಪ್ರಾಯೋಗಿಕವಾಗಿ ಮೊಬೈಲ್ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಡಿಸಿಎಂ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಪ್ರಾರಂಭಿಸಲಾಗುವ ಈ ವಿಶೇಷ ‘ಆಕ್ಸಿಜನ್ ಬಸ್ ಸೌಲಭ್ಯ” ಯಶಸ್ವಿಯಾದರೆ ಮುಂದೆ ಇನ್ನಷ್ಟು ‘ಆಕ್ಸಿಜನ್ ಬಸ್ ಸೌಲಭ್ಯ’ ನೀಡಲು ಸಾರಿಗೆ ನಿಗಮಗಳಿಂದ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳು ಹೆಚ್ಚಾಗಿದ್ದು, ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಕ್ಸಿಜನ್ ನೀಡುವುದು ವಿಳಂಬವಾಗಿ, ತೀವ್ರ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸವದಿಯವರು ವಿವರಿಸಿದ್ದಾರೆ.
ಆಕ್ಸಿಜನ್ ಪೂರೈಸುವ ಈ ವಿಶೇಷ ಬಸ್ಸನ್ನು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗುವುದು. ಹೊರಗಿನಿಂದ ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್ಸಿನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಈ ರೀತಿಯ ಮೊಬೈಲ್ ಆಕ್ಸಿಜನ್ ಬಸ್ ಪ್ರಯೋಗವು ಇಡೀ ದೇಶದಲ್ಲಿಯೇ ಒಂದು ವಿನೂತನ ಯತ್ನವಾಗಿದೆ. ಇದನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಫೌಂಡೇಶನ್ ಇಂಡಿಯಾ ಸಂಸ್ಥೆಯ ಸಂಜಯ್ ಗುಪ್ತ ಅವರಿಗೆ ಸವದಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.