“ಗಂಗೆ”ಯಲ್ಲಿ ರಾಶಿ ರಾಶಿ ಹೆಣಗಳು..!?

“ಗಂಗೆ”ಯಲ್ಲಿ ರಾಶಿ ರಾಶಿ ಹೆಣಗಳು..!?
ಮಹಾಂತೇಶ ಇರಳಿ
ಬಿಹಾರ: ಸತತ ಎರಡನೇ ದಿನವೂ ಗಂಗಾ ನದಿ ದಂಡೆಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಈ ಮೃತ ದೇಹಗಳು ಉತ್ತರ ಪ್ರದೇಶದಿಂದ ಹರಿದು ಬಿಡಲಾಗಿದೆ ಎಂದು ಬಿಹಾರದ ಅಧಿಕಾರಿಗಳು ಆರೋಪಿಸಿದ್ದಾರೆ.
ಬಿಹಾರದ ಬಕ್ಸಾರ್‌ನ ಗಂಗಾ ನದಿ ತಟದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳು ಕಂಡು ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಈಗ ಬಕ್ಸಾರ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿಯೂ ಗಂಗೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ನೀರಿನಲ್ಲಿ ಉಂಟಾಗುವ ಮಾಲಿನ್ಯವು ರೋಗದ ತ್ವರಿತ ಹರಡುವಿಕೆಗೆ ಕಾರಣವಾಗಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಮತ್ತು ಬಿಹಾರದ ಗಡಿಯಲ್ಲಿರುವ ಚೌಸಾ ಪಟ್ಟಣದಲ್ಲಿ ಸೋಮವಾರ 100 ಕ್ಕೂ ಹೆಚ್ಚು ಮೃತ ದೇಹಗಳು ಗಂಗಾ ನದಿಯಲ್ಲಿ ತೇಲುತ್ತಾ ನದಿ ದಡಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದವು. ಈ ದೃಶ್ಯಗಳನ್ನು ಕಂಡ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದರು.
ಬಿಹಾರದ ಬಕ್ಸಾರ್ ಪ್ರದೇಶದ ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವ ಘಟನೆ ದುರದೃಷ್ಟಕರ. ಇದರ ಕುರಿತು ಖಂಡಿತವಾಗಿಯೂ ತನಿಖೆ ನಡೆಯಬೇಕಾಗಿದೆ, ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.