ಕೋವಿಡ್ ಕುರಿತು ಮಹತ್ವದ ಸಭೆ ನಡೆಸಲು ನಾಳೆ ರಾಯಚೂರಿಗೆ ಡಿಸಿಎಂ ಸವದಿ ಪ್ರವಾಸ..!

ಕೋವಿಡ್ ಕುರಿತು ಮಹತ್ವದ ಸಭೆ ನಡೆಸಲು ನಾಳೆ ರಾಯಚೂರಿಗೆ ಡಿಸಿಎಂ ಸವದಿ ಪ್ರವಾಸ..!
ಶ್ರೀನಿವಾಸ ಪಟ್ಟಣ
ರಾಯಚೂರ: ಉಪ ಮುಖ್ಯಮಂತ್ರಿಗಳು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿಯವರು ಶುಕ್ರವಾರ ರಾಯಚೂರಿಗೆ ಭೇಟಿ ನೀಡಿ, ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಕೋವಿಡ್ 2ನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಇತ್ತಿಚಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಯಚೂರು ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನ ನೀಡಿದ್ದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಚಿವರ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಜನರು ಗುಂಪುಗುಂಪಾಗಿ ಭೇಟಿ ಮಾಡುವುದನ್ನು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿ ಪಾಲಿಸುವ ಬಗ್ಗೆ ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕೆಂದು ಡಿಸಿಎಂ ಸವದಿ ಅವರು ತಿಳಿಸಿದ್ದಾರೆ.