ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ: ಯಾಕೆ ಗೊತ್ತಾ..?

ಮಹಾಂತೇಶ ಇರಳಿ
ಬೆಳಗಾವಿ:ಬೆಳಗಾಬಿ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಎಸಿ ಕಚೇರಿಗೆ ಆಗಮಿಸಿದ ಕೋರ್ಟ್ ಸಿಬ್ಬಂದಿ ಅಪಾರ ಪ್ರಮಾಣದ ಪೀಠೋಪಕರಣ ಜಪ್ತಿ ಮಾಡಿಕೊಂಡರು.
ಪ್ರಕರಣ ಏನು ಎಂದು ನೋಡೊದಾದ್ರೆ, ಪರಿಹಾರ ನೀಡಲು ವಿಳಂಬ ಮಾಡಿದಕ್ಕೆ ಕೋರ್ಟ್ ಸಿಬ್ಬಂದಿ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿಕೊಂಡಿದ್ದಾರೆ.
ಸಾಂಬ್ರಾ ಬಳಿ ಏರ್ಪೋರ್ಸ್ ಅಧಿಕಾರಿಗಳಿಗೆ ಕ್ವಾರ್ಟರ್ಸ್ ನಿರ್ಮಿಸಲು ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ವೇಳೆ 30 ಕುಟುಂಬಗಳು 35 ಎಕರೆ ಜಮೀನು ಕಳೆದುಕೊಂಡಿದ್ದರು.
ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಪರಿಹಾರ ನೀಡದಕ್ಕೆ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡುವಂತೆ ನ್ಯಾಯಾಲಯದ ಆದೇಶ ಮಾಡಿತ್ತು. ಬಡ್ಡಿ ಸಹಿತ 5ಕೋಟಿಗೂ ಅಧಿಕ ಪರಿಹಾರ ಬರಬೇಕಿದೆ ಎಂದು ರೈತರ ಪರ ವಕೀಲ ಅಪ್ಪಾಸಾಹೇಬ್ ಸದರಜೋಶಿ ಈ ವೇಳೆ ಮಾಹಿತಿ ನೀಡಿದ್ದಾರೆ.