ನಿಗದಿತ ಸಮಯಕ್ಕೆ ಕೋವಿಡ್ ವರದಿ ನೀಡಲು ಕ್ರಮ: ಡಿಸಿ ಡಾ.ಕೆ.ಹರೀಶ್ ಕುಮಾರ್

ಮಹಾಂತೇಶ ಇರಳಿ
ಬೆಳಗಾವಿ: ಸಂಗ್ರಹಿಸಲಾಗುವ ಕೋವಿಡ್ ಮಾದರಿಯನ್ನು ಸಂಪೂರ್ಣವಾಗಿ ಇಲ್ಲಿಯೇ ಪರೀಕ್ಷಿಸಲು ಸಾಧ್ಯವಾಗುವಂತೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಇಂದಿ ನೆಹರೂ ನಗರದಲ್ಲಿರುವ ಐ.ಸಿ.ಎಂ.ಆರ್-ರಾಷ್ಟ್ರೀಯ ಚಿಕಿತ್ಸಾ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಎನ್.ಐ.ಟಿ.ಎಂ ಅಧಿಕಾರಿಗಳ ಸಭೆ ನಡೆಸಿ, ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರತಿದಿನ ಆರು ಸಾವಿರ ಜನರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಬಿಮ್ಸ್ ಹಾಗೂ ಎನ್.ಐ.ಟಿ.ಎಂ ಪ್ರಯೋಗಾಲಯದಲ್ಲಿ ಪ್ರತಿದಿನ ಮೂರುಸಾವಿರ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಇನ್ನುಳಿದ ಮಾದರಿಯನ್ನು ಬೇರೆ ಜಿಲ್ಲೆಗಳಿಗೆ ಕಳಿಸಲಾಗುತ್ತಿದೆ. ಇದರಿಂದ ವರದಿ ಬರುವುದು ವಿಳಂಬವಾಗುತ್ತಿದೆ. ಈ ರೀತಿಯ ವಿಳಂಬವನ್ನು ತಪ್ಪಿಸುವ ಕುರಿತು ಚರ್ಚೆಲಾಗಿದೆ.
ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿ ತಪಾಸಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಎಲ್ಲ ಮಾದರಿಗಳನ್ನು ಸ್ಥಳೀಯವಾಗಿ ಪರೀಕ್ಷಿಸಲು ಇರುವ ಎಲ್ಲ ಮಾರ್ಗೋಪಾಯಗಳನ್ನು ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ವಿವರಿಸಿದರು.
ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿ ತಪಾಸಣಾ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಿರುವ ವೈದ್ಯಕೀಯ ಪರಿಕರ ಹಾಗೂ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕೂಡಲೇ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಎಲ್ಲ ಮಾದರಿಗಳನ್ನು ಸ್ಥಳೀಯವಾಗಿಯೇ ಪರೀಕ್ಷಿಸಿ ಆದಷ್ಟು ಬೇಗನೇ ವರದಿ ನೀಡಲು ಅನುಕೂಲವಾಗುವಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.