ಹಳ್ಳಿಯಿಂದ ತಿಮ್ಮಪ್ಪನ ದರ್ಶನಕ್ಕೆ ಹೊದ ಅಜ್ಜಿ ದಿಲ್ಲಿ ತಲುಪಿದ್ದು ಹೇಗೆ..?

ಹಳ್ಳಿಯಿಂದ ತಿಮ್ಮಪ್ಪನ ದರ್ಶನಕ್ಕೆ ಹೊದ ಅಜ್ಜಿ ದಿಲ್ಲಿ ತಲುಪಿದ್ದು ಹೇಗೆ..?
ಬಾಗಲಕೋಟೆ: ತಿರುಪತಿ ದರ್ಶನಕ್ಕಾಗಿ ಹೋಗಿದ್ದ ಅಜ್ಜಿ ಓರ್ವಳು ತಿರುಪಯಿಂದ ವಾಪಸ್ ಬರುವಾಗ ರೈಲಿನಲ್ಲಿ ತಪ್ಪಿಸಿಕೊಂಡು ದಿಲ್ಲಿ ತಲುಪಿ, ಯೋಧನ ಸಹಾಯದಿಂದ ಸ್ವ ಗ್ರಾಮಕ್ಕೆ ಮರಳಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ದಾಸವಾಳ ಗ್ರಾಮದ ಶಿವಮ್ಮ ಪಾಟೀಲ(72), ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಏ.10ರಂದು ಮೊಮ್ಮಗನ ಜತೆ ಶಿವಮ್ಮ ಹೋಗಿದ್ದರು. ವಾಪಸ್ ಬರುವಾಗ ಮೊಮ್ಮಗನಿಂದ ತಪ್ಪಿಸಿಕೊಂಡಿದ್ದಾರೆ. ಜತೆಗೆ ರೈಲು ಬದಲಾವಣೆಯಾಗಿ ದಿಲ್ಲಿ ತಲುಪಿದ್ದಾರೆ.ಒಂದು ವಾರದ ನಂತರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಯೋಧ ಮುದುಕಯ್ಯ ಶೇಖರಯ್ಯ ಹಿರೇಮಠ ಸಹಾಯದಿಂದ ಊರು ಸೇರಿದ್ದಾರೆ.
ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಅಜ್ಜಿ, ದಿಕ್ಕು ತೋಚದೆ ಕುಳಿತಿದ್ದಾರೆ. ಅದೇ ವೇಳೆ ರಜೆಗೆ ಪಡೆದು ಊರಿಗೆ ಬರುತ್ತಿದ್ದ ಯೋಧ ಮುದುಕಯ್ಯ, ಕನ್ನಡದಲ್ಲಿ ಮಾತನಾಡುತ್ತಿದ್ದ ಅಜ್ಜಿಯನ್ನು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಸ್ನೇಹಿತರ ಸಹಾಯದಿಂದ ದಾಸವಾಳ ಗ್ರಾಮದ ಅಜ್ಜಿಯ ಮಗನನ್ನು ಸಂಪರ್ಕಿಸಿ, ವಿಡಿಯೊ ಕಾಲ್ ಮಾಡಿ ಅಜ್ಜಿ ತಪ್ಪಿಸಿಕೊಂಡಿರುವುದು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಅಜ್ಜಿಯನ್ನು ಯೋಧ ಸ್ವಗ್ರಾಮಕ್ಕೆ ತಂದು ಮಾನವಿಯತೆ ಮೆರೆದಿದ್ದಾನೆ.