ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್


ಬೆಳಗಾವಿ: ದಿವಂಗತ ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದ ನಂತರ ಅವರ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಾಗಿದೆ. ಸುರೇಶ ಅಂಗಡಿಯವರ ಕಿರಿಯ ಪುತ್ರಿ ಶ್ರದ್ಧಾ ಸೈಲೆಂಟ್ ಆಗಿಯೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ.
ಹೌದು.. ಸುರೇಶ ಅಂಗಡಿ ಅವರ ಮುದ್ದಿನ ಮಗಳು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಪ್ರೀತಿಯ ಸೊಸೆ ಶ್ರದ್ಧಾ ಶೆಟ್ಟರ್. ಕಾಕತಾಳಿಯೋ ಅಥವಾ ವಿಧಯಾಟವೋ ಬೆಳಗಾವಿ ಜಿಲ್ಲೆ ಜನತೆ ಶ್ರದ್ಧಾ ಶೆಟ್ಟರ ಅವರನ್ನ ಸ್ವೀಕರಿಸಬೇಕಾ ಅಥವಾ ಶ್ರದ್ಧಾ ಸುರೇಶ ಅಂಗಡಿ ಅಂತಾ ಸ್ವೀಕರಿಸಬೇಕಾ ಎನ್ನುವ ಚರ್ಚೆಗಳು ಆರಂಭವಾಗಿದೆ. ಆದ್ರೆ ಸುರೇಶ ಅಂಗಡಿ ಪುತ್ರಿ ಶ್ರದ್ಧಾಳನ್ನ ಬೆಳಗಾವಿ ಲೋಕಸಭೆ ಜನತೆ ಮನೆ ಮಗಳಾಗಿ ಸ್ವೀಕರಿಸುತ್ತಿದ್ದಾರೆ. ತಂದೆ ಸುರೇಶ ಅಂಗಡಿಯವರ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಆಪ್ತರು ಶ್ರದ್ಧಾಳ ರಾಜಕೀಯ ಎಂಟ್ರಿಗೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ.

ಕಳೆದ ಎರಡ್ಮೂರು ವಾರಗಳಲ್ಲಿ ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಬೆಳಗಾವಿ ಲೋಕಸಭೆಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ. ಬೆಳಗಾವಿ ಲೋಕಸಭೆ ಮತ್ತು ಜಿಲ್ಲೆ ಪ್ರಮುಖ ನಾಯಕರು, ಶಾಸಕರು, ಪಕ್ಷದ ಕಾರ್ಯಕರ್ತರು, ವಿವಿಧ ಧರ್ಮ ಗುರುಗಳನ್ನ ಭೇಟಿ ಮಾಡಿ ಅವರ ಆಶಿರ್ವಾದವನ್ನ ಪಡೆಯುತ್ತಿದ್ದಾರೆ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಹೋದಲ್ಲೇಲ್ಲಾ ಅವರ ತಂದೆಯನ್ನ ಜನರು ಸ್ಮರಿಸುತ್ತಾ ನೀವೇ ತಂದೆ ಅಪೂರ್ಣ ಕನಸ್ಸನ್ನು ಸಾಕಾರಗೊಳಿಸಬೇಕೆಂದು ಹೆಬ್ಬಯಕೆ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ರಾಜಕೀಯದಲ್ಲಿ ಶ್ರದ್ಧಾ ಆಕ್ಟಿವ್ ಆಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲೂ ಶ್ರದ್ಧಾ ಕಾಣಿಸಿಕೊಂಡಿದ್ದರು. ಆಗ್ಲೂ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿಯ ನಾಯಕರನ್ನ ಭೇಟಿ ಮಾಡಿದ್ದರು. ಆ ಬಳಿಕ ಬೆಳಗಾವಿ ಲೋಕಸಭೆಯ ಒಂದೊಂದೇ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಶಾಸಕರೊಂದಿಗೆ ಲೋಕಸಭೆ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಅಲ್ಲದೇ ತಂದೆಯವರಿಗೆ ನೀಡದಂತೆ ಸಹಕಾರ, ಪ್ರೀತಿ ನನ್ನ ಮೇಲೂ ತೋರಿಸಬೇಕೆಂದು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸುರೇಶ ಅಂಗಡಿಯವರಿಗೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಟ್ಟಾ ಅನುಯಾಯಿ ಆಗಿದ್ದರು. ಹೀಗಾಗಿ ಅಟಲ್ಜಿ ಅವರ ಜನುದಿನದಂತೆ ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹಸಿರು ಟಾವೆಲ್ ಹಾಕಿಕೊಳ್ಳುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಾಗಿದೆ. ಬೆಳಗಾವಿ ಲೋಕಸಭೆಗೆ ಹತ್ತಾರು ಜನರು ಟಿಕೆಟ್ಗಾಗಿ ಲಾಭಿ ನಡೆಸುತ್ತಿದ್ದಾರೆ. ಆದ್ರೆ ಶ್ರದ್ಧಾ ರಾಜಕೀಯ ಎಂಟ್ರಿ ಬಳಿಕ ಈಗ ಎಲ್ಲರ ಚಿತ್ತ ಮತ್ತೆ ಸುರೇಶ ಅಂಗಡಿ ಕುಟುಂಬದತ್ತ ಮುಖ ಮಾಡುವಂತಾಗಿದೆ. ಬೆಳಗಾವಿ ಲೋಕಸಭೆಗೆ ಶ್ರದ್ಧಾ ತಾಲೀಮು ಆರಂಭಿಸಿರುವುದು ಬಿಜೆಪಿ ಪಾಳ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
