ಆಪೆಕ್ಸ್ ಬ್ಯಾಂಕ್ ಮೇಲೆ ಸಾಹುಕಾರ ಕಣ್ಣು…!

ಶ್ರೀನಿವಾಸ ಪಟ್ಟಣ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಯುದ್ಧ ತಕ್ಷಣಕ್ಕೆ ಮುಗಿದಂತಾಗಿದೆ. ಬಿಜೆಪಿ ಸಾಹುಕಾರರು ಒಂದಾಗಿದ್ದರಿಂದ ಎಲ್ಲವೂ ಅವರು ಅಂದುಕೊಂಡಂತೆ 16 ನಿರ್ದೇಶಕರ ಆಯ್ಕೆ ಕೂಡಾ ನಡೆದು ಹೋಗಿದೆ. ಈಗ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಣ್ಣು ಆಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಹೇಗೆ ಬೆಳಗಾವಿಗೆ ಕೆಎಂಎಫ ಅಧ್ಯಕ್ಷ ಸ್ಥಾನ ಸಿಕ್ಕಿತೂ ಹಾಗೇಯೇ ಬೆಳಗಾವಿ ಜಿಲ್ಲೆಗೆ ಆಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗಲಿದೆ.

ಸದ್ಯ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ ಅಂಗಲದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಲೆಕ್ಕಾಚಾರ ಆರಂಭವಾಗಿದೆ. ಮಾಜಿ ಸಂಸದ ರಮೇಶ ಕತ್ತಿ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗ್ತಾರೆ ಅಂತಾ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಆದ್ರು ಕೊಂಚ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ತೆರೆ ಮರೆಯ ಹಿಂದೆ ಬೇರೆ ರೀತಿಯ ಲೆಕ್ಕಾಚಾರಗಳು ಸಹ ನಡೆದಿವೆ ಎನ್ನುವ ಗೂಸುಗೂಸು ಡಿಸಿಸಿ ಬ್ಯಾಂಕ್ ಅಂಗಳದಲ್ಲಿ ಸದ್ದು ಮಾಡಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅವಿರೋಧ ಆಯ್ಕೆ ಬಳಿಕ ಆಪೆಕ್ಸ್ ಬ್ಯಾಂಕಗೆ ನಿರ್ದೇಶಕರಾಗಿ ನೇಮಕಗೊಳಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಮಂತ್ರಿ ಉಮೇಶ ಕತ್ತಿ ಮೂವರು ಬಣಗಳ ಮಧ್ಯೆ ಕೆಲ ಆಂತರಿಕ ಒಪ್ಪಂದಗಳು ನಡೆದಿವೆ. ಅದರಂತೆ ಡಿಸಿಎಂ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯಿಂದ ಆಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಡಿಸಿಸಿ ಬ್ಯಾಂಕನಿಂದ ಡಿಸಿಎಂ ಲಕ್ಷ್ಮಣ ಸವದಿ ಆಪೆಕ್ಸ್ ಬ್ಯಾಂಕಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡ್ರೆ. ಮುಂದೆ ನಡೆಯುವ ಆಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಸವದಿ ಸಾಹುಕರ ಸ್ಪರ್ಧಿಸಲಿದ್ದಾರೆ. ಈ ಮೂಲಕ ಮುಂದಿನ ಎರಡ್ಮೂರು ತಿಂಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯವರೇ ಆಪೆಕ್ಸ್ ಅಧ್ಯಕ್ಷರಾಗಲಿದ್ದಾರೆ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಈ ಹಿಂದೆ ಸಹಕಾರ ಮಂತ್ರಿಯಾಗಿದ್ದಾಗ ಸಹಕಾರ ರಂಗದಲ್ಲಿ ತಮ್ಮದೆಯಾದ ಹಿಡಿತವನ್ನ ಹೊಂದಿದ್ದಾರೆ. ಹೀಗಾಗಿ ಲಕ್ಷ್ಮಣ ಸವದಿಯವರಿಗೆ ಆಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನ ಗಿಟ್ಟಿಸಿಕೊಳ್ಳಲು ಕಷ್ಟವಾಗುವುದಿಲ್ಲ ಎಂದು ಆಪ್ತ ಮೂಲಗಳು ಹೇಳುತ್ತಿವೆ.