ಮತ್ತೆ ಸವದತ್ತಿ ಆದಿಶಕ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ನಿರ್ಬಂಧ

ಶ್ರೀನಿವಾಸ ಪಟ್ಟಣ
ಬೆಳಗಾವಿ: ಸವದತ್ತಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಮತ್ತು ಚಿಂಚಲಿ ಮಾಯಕ್ಕ ದೇವಿಯ ಸಾರ್ವಜನಿಕ ದರ್ಶನಕ್ಕೆ ಮತ್ತೆ ಒಂದು ತಿಂಗಳು ಕಾಲ ನಿಷೇಧ ವಿಧಿಸಲಾಗಿದೆ. ಸಾರ್ವಜನಿಕರು ಮತ್ತು ಭಕ್ತರ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿಷೇಧ ಆದೇಶವನ್ನ ನವೆಂಬರ್ 30ರ ವರೆಗೂ ಮುಂದೊರೆಸಿ ಆದೇಶವನ್ನ ಹೊರಡಿಸಿದ್ದಾರೆ. ಕೊರೊನಾ ಅಟ್ಟಹಾಸ ಹಿನ್ನೆಲೆ ಕಳೆದ ಮಾರ್ಚ 22 ರಿಂದ ಸತತ 8 ತಿಂಗಳುಗಳ ಕಾಲ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಮತ್ತು ರಾಯಬಾಗದ ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನದಲ್ಲಿ ಸಾರ್ವಜನಿಕರು, ಭಕ್ತರ ದರ್ಶನಕ್ಕೆ ನಿಷೇಧ ವಿಧಿಸಲಾಗಿದೆ. ಈ ಎರಡು ದೇವಸ್ಥಾನಕ್ಕೆ ರಾಜ್ಯದ ನಾನಾ ಕಡೆಯಿಂದ ಮತ್ತು ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಕೊರೊನಾ ಇನ್ನೂ ಕಡಿಮೆಯಾಗದ ಪ್ರಯುಕ್ತ ಈ ಎರಡು ದೇವಸ್ಥಾನ ದರ್ಶನ ಕ್ಕೆ ಜಿಲ್ಲಾಡಳಿತ ಸಾರ್ವಜನಿಕರು,ಭಕ್ತರ ಹಿತದೃಷ್ಟಿಯಿಂದ ನಿರ್ಬಂಧ ವಿಧಿಸಿದೆ. ಆದ್ರೆ ಸವದತ್ತಿ ದೇವಸ್ಥಾನ ದಲ್ಲಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ಸಿಇಒ ರವಿ ಕೋಟಾರಗಸ್ತಿ ಮಾಹಿತಿ ನೀಡಿದ್ದಾರೆ.