ಬೀಗರಿಗೆ ಆರೋಗ್ಯಕ್ಕಿಂತ ಜನರ ಸೇವೆನೇ ಹೆಚ್ಚಾಗಿತ್ತು: ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿಕೆ

ಮಹಾಂತೇಶ ಇರಳಿ
ಬೆಳಗಾವಿ-ಬೀಗರಿಗೆ ಕೊರೊನಾ ಸಾವು ಬರುತ್ತೆ ಅಂತಾ ಅಂದುಕೊಂಡಿರಲಿಲ್ಲ ಎಂದು ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ತಮ್ಮ ನೋವು ತೊಂಡಿಕೊಂಡರು.
ಬೆಳಗಾವಿ ಸಂಪಿಗೆ ರಸ್ತೆಯ ಸುರೇಶ್ ಅಂಗಡಿ ನಿವಾಸದಲ್ಲಿ ಮಾತನಾಡಿದ ಅವರು, ಸುರೇಶ ಅಂಗಡಿ ನಿಧನ ನಮಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ. ಅವರು ನಮ್ಮ ಬೀಗರಾಗುವ ಮುನ್ನವೂ ಸಹ ನನ್ನ ಜೊತೆ ಆಪ್ತರಾಗಿದ್ದರು. ನಾನು ಅವರು ಬೆಳಗಾವಿ ಜಿಲ್ಲೆಯ ಹಲವೆಡೆ ಒಟ್ಟಿಗೆ ಹಗಲಿರುಳು ಓಡಾಡಿ ಪಕ್ಷ ಸಂಘಟನೆ ಮಾಡಿದ್ದೇವೆ. ಅವರಿಗೆ ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೇಟ್ ಸಿಗಲ್ಲ ಅನ್ನೋ ಮಾತುಗಳು ಬಂದಾಗಲೂ ಸಹ ಅವರು ಪಕ್ಷನಿಷ್ಠರಾಗಿದ್ದರು.
ಸುರೇಶ ಅಂಗಡಿಯವರಿಗೆ ಅವರ ಆರೋಗ್ಯದ ಕಾಳಜಿಗಿಂತಲೂ ಜನರ ಸೇವೆನೇ ಹೆಚ್ಚಾಗಿತ್ತು. ಅವರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ರು ಅನ್ನೋ ಮಾತುಗಳು ಸಹ ಕೇಳಿಬಂದವೂ. ಆದ್ರೆ ಅವರಿಗೆ ಜನಸೇವೆ ಮೇಲೆಯೇ ಹೆಚ್ಚು ಆಸಕ್ತಿ ಇತ್ತು. ಅವರು ಆಸ್ಪತ್ರೆಗೆ ದಾಖಲಾದ ನಂತರ ನಾನು ಪ್ರತಿನಿತ್ಯ ಪುತ್ರನ ಮೂಲಕ ವರದಿ ತರಿಸಿಕೊಳ್ಳುತ್ತಿದೆ. ಅವರು ಹುಷಾರ್ ಆದ್ರು ಅನ್ನುವಾಗಲೇ ಲೋ ಬಿಪಿಯಾಗಿ ಕಾರ್ಡಿಯಾಕ್ ಅಟ್ಯಾಕ್ ಆಗಿದೆ. ಸುರೇಶ ಅಂಗಡಿಯವರು ರಾಜ್ಯದಲ್ಲಿ ಹಲವು ರೇಲ್ವೆ ಯೋಜನೆಗಳನ್ನು ಜಾರಿಗೆ ತಂದಿದ್ರು. ಕೊರೊನಾದಿಂದ ಬಲಿಯಾಗ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಜನಮಾನಸದಲ್ಲಿ ಸುರೇಶ್ ಅಂಗಡಿಯವರು ಸದಾ ಇರ್ತಾರೆ.
ಪಕ್ಷ ಸಂಘಟನೆ ಬೆಳಗಾವಿಗೆ ಬಂದಾಗ ನನ್ನ ಜೊತೆ ಪ್ರತಿ ಹಳ್ಳಿ ಹಳ್ಳಿಗೂ ಪ್ರವಾಸ ಮಾಡಿದ್ರು. ಇಬ್ಬರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳ ಹಾಗೆಯೇ ಬೆಳೆಸಿದ್ರು. ಸುರೇಶ್ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರಲು ನಾವು ಸಹ ಪ್ರಯತ್ನಿಸಿದೆವು. ಕಾನೂನು ತೊಡಕು ಇರುವುದರಿಂದ ಎಸ್ಓಪಿ ಪ್ರಕಾರ ಆಗಲ್ಲ ಎಂದ್ರು. ಪ್ರಣಬ್ ಮುಖರ್ಜಿಯವರು ಮೃತಪಟ್ಟಾಗಲೂ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನೆರವೇರಿಸಲಾಗಿತ್ತು. ಕೊರೊನಾ ಮಾರ್ಗಸೂಚಿ ಪ್ರಕಾರ ಪಾರ್ಥಿವ ಶರೀರ ತರಲು ಆಗಲಿಲ್ಲ. ಅವರ ಅಂತ್ಯಕ್ರಿಯೆಯಲ್ಲೂ ಜನರು ಭಾಗವಹಿಸಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.