ನವಂಬರ 6 ಡಿಸಿಸಿ ಬ್ಯಾಂಕ್ ಚುನಾವಣೆ; ಕತ್ತಿ, ಜಾರಕಿಹೊಳಿ, ಸವದಿ ಬಣದ ಮಧ್ಯೆ ಫೈಟ್…

ಮಹಾಂತೇಶ ಇರಳಿ
ಬೆಳಗಾವಿ- ಮತ್ತೆ ಬಿಜೆಪಿ ಸರ್ಕಾರ ಮತ್ತು ವಿಪಕ್ಷಗಳ ಚಿತ್ತ ಬೆಳಗಾವಿ ಜಿಲ್ಲಾ ರಾಜಕಾರಣದತ್ತ ನೆಟ್ಟಿದೆ. ಯಾಕೆಂದ್ರೆ ಈ ಹಿಂದಿನ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿತ್ತು ಇದೇ ಬೆಳಗಾವಿ ಜಿಲ್ಲಾ ರಾಜಕಾರಣದಿಂದ. ಈಗ ಅಂತಹದ್ದೆ ರಾಜಕೀಯ ಲೆಕ್ಕಾಚಾರ ಬೆಳಗಾವಿ ಜಿಲ್ಲೆಯಲ್ಲಿ ಆರಂಭವಾಗಿದೆ. ಬಹು ನಿರೀಕ್ಷಿತ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್(ಡಿಸಿಸಿ) ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಮುಂಬರುವ ನವಂಬರ 6ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ನಡೆಯಲಿದೆ. ಕೊರೊನಾ ಹಿನ್ನೆಲೆ ಡಿಸಿಸಿ ಬ್ಯಾಂಕ್ ಚುನಾವಣೆ ದಿನಾಂಕ ಮುಂದೂಡಲಾಗಿತ್ತು. ಈಗ ಡಿಸಿಸಿ ಬ್ಯಾಂಕ್ ರಾಜಕೀಯ ಚದುರಂಗದ ಆಟ ಗರಿಗೆದರಿದೆ.
ಬೆಳಗಾವಿ ಜಿಲ್ಲಾ ರಾಜಕಾರಣಿಗಳ ಪಾಲಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ತುಂಬಾ ಮಹತ್ವದ್ದಾಗಿದೆ. ಡಿಸಿಸಿ ಹಿಡಿತ ಸಾಧಿಸಿದ್ರೆ ಜಿಲ್ಲಾ ರಾಜಕಾರಣದ ರಿಮೋಟ್ ಕಂಟ್ರೋಲ್ ಕೈಯಲ್ಲಿ ಸಿಕ್ಕಂತೆ. ಈಗಾಗಲೇ ಮಾಜಿ ಸಂಸದ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷರಾಗಿದ್ದಾರೆ. ಮತ್ತೊಮ್ಮೆ ಅಧ್ಯಕ್ಷ ಗಾದಿಗೆ ಏರಲು ರಮೇಶ ಕತ್ತಿ ಕಸರತ್ತು ಆರಂಭಿಸಿದ್ದಾರೆ.
ರಮೇಶ ಕತ್ತಿ ಬೆನ್ನಿಗೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ, ಸಹೋದರ ಶಾಸಕ ಉಮೇಶ ಕತ್ತಿ, ಮಾಜಿ ಸಚಿವ, ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿಂತಿದ್ದರೆ. ಅತ್ತ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಅರವಿಂದ ಪಾಟೀಲ್ ನೇತೃತ್ವದ ಬಣವೂ ಚುನಾವಣಾ ಕಸರತ್ತು ತೆರೆ ಮರೆಯಲ್ಲಿ ಆರಂಭಿಸಿವೆ.
ಈಗಾಗಲೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಾಧಕ-ಬಾಧಕ ಬಗ್ಗೆ ಬಿಜೆಪಿ ಪಕ್ಷದ ವರಿಷ್ಠರು, ಆರಎಸಎಸ ಮುಖಂಡರು ಮಾಹಿತಿ ತರೆಸಿಕೊಂಡಿದ್ದಾರೆ. ಮತ್ತೊಂದು ಫಿಎಲಡಿ ಬ್ಯಾಂಕ್ ಕುಸ್ತಿಯಂತೆ ಡಿಸಿಸಿ ಬ್ಯಾಂಕ್ ಕುಸ್ತಿ ಬಿಜೆಪಿ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸಬಾರದೆಂದು, ಪಕ್ಷದ ವರಿಷ್ಠರು ಜಿಲ್ಲಾ ನಾಯಕರಿಗೆ ಒಟ್ಟಾಗಿ ಹೋಗುವಂತೆ ಕಟ್ಟಪ್ಪಣೆ ನೀಡಿದ್ದಾರೆ.
ಆದ್ರೆ ಎರಡು ಬಣದ ಮುಖಂಡರು ಡಿಸಿಸಿ ಬ್ಯಾಂಕ್ ಚುನಾವಣೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚೆನ್ನರಾಜ ಹಟ್ಟಿಹೊಳಿ ಚುನಾವಣಾ ಅಖಾಡಕ್ಕೆ ಎಂಟ್ರಿಕೊಡಲಿದ್ದಾರೆ. ಈಗಾಗಲೇ ತೆರೆ ಮರೆಯಲ್ಲಿ ಚುನಾವಣಾ ರಣತಂತ್ರಗಳು, ಚುನಾವಣಾ ಪ್ರಚಾರ ಕೂಡಾ ಆರಂಭವಾಗಿದೆ.